ದೇಹದ ಗುಡಿಯ ನೋಡಿರಣ್ಣಾ
ದೇಹವೆಂಬ ದೇವಾಲಯವ ನೋಡಿ:
ಅಧಿಭೌತಿಕ, ಅಧಿದೈವಿಕ, ಅಧ್ಯಾತ್ನ ಈ ಮೂರು ತತ್ವಗಳ ತ್ರಿಕೋನದಲ್ಲಿ- ಅವೇ ಅಡಿಗಲ್ಲು; ನಿರಾಕಾರನಾದ ಆ ಮೂಲ ತತ್ವ (ಪರಬ್ರಹ್ಮ) ಸಗುಣವಾಗಿ ಈ ದೇಹದಲ್ಲಿ ಬಂದು ವಾಸಿಸುವ ಅಚ್ಚರಿ!
ಗುಡಿಯ ನೋಡಿರಣ್ಣಾ ದೇಹದ 
ಗುಡಿಯ ನೋಡಿರಣ್ಣಾ ||ಪಲ್ಲ||

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ ||ಅನುಪಲ್ಲ||

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ ||೧||

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ ||೨||

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ ||೩|| 
ಶಿಶುನಾಳ ಶರೀಫರ ಪದಗಳು -ಅನಾಮಿಕ
ಶಿಶುನಾಳ ಶರೀಫರು
 ಶಿಶುನಾಳ ಶರೀಫರ ಗೀತೆಗಳು

ನೋಡಿ
ಶರೀಫ ಸಾಹಿತ್ಯ
ಉಲ್ಲೇಖ
ಶಿಶುನಾಳ ಶರೀಫರ ಪದಗಳು -ಅನಾಮಿಕ
ವರ್ಗ: ದಾಸ ಸಾಹಿತ್ಯವರ್ಗ:ಕನ್ನಡ ಸಾಹಿತ್ಯ